ಆಹಾರಗಳನ್ನು ಕೆಡಿಸುವ ಸೂಕ್ಷ್ಮಜೀವಿಗಳು, ಅವುಗಳನ್ನು ಹತೋಟಿಗೆ ತರುವ ಕ್ರಮಗಳು, ಅಪೇಕ್ಷಿತ ಸೂಕ್ಷ್ಮಜೀವಿಗಳಿಂದ ಹುದುಗೇಳಿಸಿದ ಆಹಾರಗಳು, ಸೂಕ್ಷ್ಮಜೀವಿಗಳನ್ನೇ ಆಹಾರವಾಗಿ ಉಪಯೋಗಿಸುವುದರ ಸಾಧ್ಯತೆ ಮುಂತಾದ ವಿಚಾರಗಳನ್ನು ಈ ವಿಭಾಗದಲ್ಲಿ ಪರಿಶೀಲಿಸುತ್ತಾರೆ. ಹಣ್ಣು, ತರಕಾರಿ, ಮಾಂಸಾಹಾರ, ಪಾನೀಯಗಳು ಮುಂತಾದುವು ಸಂಗ್ರಹಿಸಿಟ್ಟಾಗ ಕೆಡುತ್ತವೆ. ಇದರಿಂದ ಆಹಾರ ಕೈಗಾರಿಕೆಗಳವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಬಹುದು. ಆದ್ದರಿಂದ ಅವು ಕೆಡದಂತೆ ಸಂಸ್ಕರಿಸಿ ಸೂಕ್ಷ್ಮಜೀವಿಗಳನ್ನು ತಡೆಗಟ್ಟುವುದು ಬಹುಮುಖ್ಯವಾದ ಕೆಲಸ. ಕೈಗಾರಿಕೆಗಳವರು ತಮ್ಮ ತೊಂದರೆಗಳನ್ನು ಸಂಶೋಧನಾಲಯದವರಿಗೆ ತಿಳಿಸಿ ಅದರಿಂದ ಪರಿಹಾರ ಕ್ರಮಗಳನ್ನು ಪಡೆಯುತ್ತಾರೆ. ಹಣ್ಣಿನ ರಸ, ಕಾಕಂಬಿ, ಯವ (ಮಾಲ್ಟ್) ಮುಂತಾದ ಶರ್ಕರ ಪದಾರ್ಥಗಳಿಂದ ಯೀಸ್ಟ್ ಸೂಕ್ಷ್ಮಜೀವಿ ಹುದುಗೇಳಿಸಿ ವೈನ್ ಪಾನೀಯಗಳನ್ನುಂಟು ಮಾಡುತ್ತದೆ. ಇವುಗಳ ತಯಾರಿಕೆಯ ಬಗ್ಗೆ ಕೈಗಾರಿಕೆಯವರಿಗೆ ತಿಳಿವಳಿಕೆ ನೀಡಲಾಗುತ್ತದೆ. ಕೆಲವು ಕಾಳು, ಬೇಳೆ ಮುಂತಾದುವುಗಳಿಂದ ಹುದುಗೇಳಿಸಿದ ಆಹಾರಗಳನ್ನು ಮಾಡುವ ಕ್ರಮ, ಕಾಕಂಬಿಯಿಂದ ಆಹಾರಯೋಗ್ಯ ಯೀಸ್ಟ್ ತಯಾರಿಸುವ ಕ್ರಮಗಳನ್ನು ಕಂಡುಹಿಡಿಯಲಾಗಿದೆ. ಈ ವಿಭಾಗದ ಕೆಲವು ಮುಖ್ಯ ಕೊಡುಗೆಗಳು: 1. ಬ್ರೆಡ್ ತಯಾರಿಕೆಯಲ್ಲಿ ಮುಖ್ಯವಾಗಿ ಬೇಕಾದ ಯೀಸ್ಟನ್ನು ಒಣರೂಪದಲ್ಲಿ ಕಾಕಂಬಿಯಿಂದ (ಮೊಲಾಸಸ್) ಕೈಗಾರಿಕಾ ಮಟ್ಟದಲ್ಲಿ ತಯಾರಿಸುವ ಕ್ರಮ. ಈ ತಿಳಿವಳಿಕೆಯನ್ನು ಪಡೆದುಕೊಂಡ ಉತ್ತರಭಾರತದ ಕಂಪನಿಯೊಂದು ಈಗ ಯೀಸ್ಟ್ ತಯಾರಿಸಿ ಮಾರಾಟ ಮಾಡುತ್ತಿದೆ. ಹಿಂದೆ ಯೀಸ್ಟ್ ಹೊರದೇಶಗಳಿಂದಲೇ ಬರಬೇಕಾಗಿತ್ತು. 2. ಶಕ್ತಿವರ್ಧಕ ದ್ರಾಕ್ಷಾರಸ (ಟಾನಿಕ್ ವೈನ್), ಮೆಡಿಕೇಟೆಡ್ ದ್ರಾಕ್ಷಾರಸ ಭಾರತದ ವಿವಿಧ ಹಣ್ಣಿನ ರಸಗಳಿಂದ ವೈನ್ ತಯಾರಿಸುವ ಬಗೆ-ಈ ವಿಧಾನಗಳನ್ನು ಕೈಗಾರಿಕೆಯವರಿಗೆ ಒದಗಿಸಲಾಗಿದೆ. 3. ಹಣ್ಣುಗಳಿಂದ ಸುಲಭವಾಗಿ ತಿಳಿಯಾದ ರಸಗಳನ್ನು ತೆಗೆಯಲು ಬೇಕಾದ ಕಿಣ್ವಗಳು, ಇವನ್ನು ತೌಡು (ಬ್ರಾನ್) ಮುಂತಾದುವುಗಳ ಮೇಲೆ ಬೂಷ್ಟು ಬೆಳೆಸಿ ಪಡೆಯಲಾಗುತ್ತದೆ. ಈ ಕ್ರಮವನ್ನು ಕೈಗಾರಿಕೆಯವರಿಗೆ ಕೊಡಲಾಗಿದೆ. ಇವಲ್ಲದೆ ಆಹಾರಗಳಲ್ಲಿ ಕೆಲವು ಜಾತಿಯ ಬೂಷ್ಟುಗಳ ಬೆಳೆವಣಿಗೆಯಿಂದ ಉಂಟಾಗುವ ಅಫೊಲ್ಲೋಟಾಕ್ಸಿನ್ ವಿಷದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿವೆ. ಬೂಷ್ಟು ಬೆಳೆದ ಕಡಲೆಕಾಯಿ, ಕುಸುಬಲು ಅಕ್ಕಿ, ಹಿಂಡಿ ಮುಂತಾದುವು ಆಹಾರಕ್ಕೆ ಅನರ್ಹವೆಂದು ತೋರಿಸಲಾಗಿದೆ. ಕಡಲೆಕಾಯಿ ಹಾಲಿನಿಂದ ಗಿಣ್ಣಿನಂಥ ಪದಾರ್ಥ ತಯಾರಿಸಲಾಗಿದೆ. ಆಹಾರಗಳ ಪೋಷಕ ಗುಣವನ್ನು ಉತ್ತಮಪಡಿಸುವ ಕೆಲವು ಅಮೈನೋ ಆಮ್ಲಗಳನ್ನು ಸೂಕ್ಷ್ಮಜೀವಿಗಳಿಂದ ಪಡೆಯಬಹುದೆನ್ನುವುದನ್ನು ತೋರಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ